ಧಾರ್ಮಿಕ ಯುದ್ಧಗಳು -
ಯೂರೋಪಿಯನ್ ಕ್ರೈಸ್ತ ಮುಸ್ಲಿಮರ ಕೈವಶವಾಗಿದ್ದ ತಮ್ಮ ಪವಿತ್ರ ಭೂಮಿಯನ್ನು ಮುಖ್ಯವಾಗಿ ಜೆರುಸಲೆಮ್ ಅನ್ನು, ವಿಮೋಚನೆಗೊಳಿಸುವ ಉದ್ದೇಶದಿಂದ 11 - 14 ನೆಯ  ಶತಮಾನಗಳಲ್ಲಿ ಎಬ್ಬಿಸಲಾದ, ಯುದ್ಧಗಳು (ಕ್ರೂಸೇಡ್ಸ್) .  ಪವಿತ್ರ ಭೂಮಿಯ ವಿಮೋಚನೆಯ ಚಳವಳಿ ಆರಂಭವಾದ್ದು ಫ್ರಾನ್ಸಿನಲ್ಲಿ. ಕ್ಲೆರ್ಮಾಂಟ್, ಮಂಡಲಿಯಲ್ಲಿ (1095).  2 ನೆಯ ಪೋಪ್ ಅರ್ಬನ್  ಇದಕ್ಕಾಗಿ ಕ್ರೈಸ್ತಲೋಕಕ್ಕೆ ಕರೆನೀಡಿದಾಗ ಈ ಸಭೆಯಲ್ಲಿ ಶಿಲುಬೆಗಳನ್ನು ಹಂಚಲಾಯಿತು.  ಶಿಲುಬೆಯ ರೀತಿಯಲ್ಲಿ ಅಂಕಿತ ಮಾಡುವುದಕ್ಕೆ ಕ್ರೂಸೆಡ್ಸ್ ಎಂಬುದಾಗಿ ಹೇಳುವುದರಿಂದ ಈ ಯುದ್ಧಗಳಿಗೆ ಕ್ರೂಸೆಡ್ಸ್ ಎಂದು ಹೆಸರಾಯಿತು.  ಆರಂಭದಲ್ಲಿ ಇವಕ್ಕೆ ಧಾರ್ಮಿಕ ಉದ್ದೇಶ ಇತ್ತಾದರೂ ಐಹಿಕ ಪರಿಗಣನೆಗಳಿಂದ ಇವು ಹೊರತಾಗಿರಲಿಲ್ಲ.  ಸ್ವಂತ ಲಾಭದ ದೃಷ್ಟಿ ಈ ಯುದ್ಧಗಳ ಹಿಂದೆ ಇದ್ದೇ ಇತ್ತು.  ಆಧ್ಯಾತ್ಮಿಕ ಹಾಗೂ ಐಹಿಕ ಉದ್ದೇಶಗಳ ನಡುವಣ ಘರ್ಷಣೆ ಕ್ರಮೇಣ ಪ್ರಬಲವಾಗಿ ಕೊನೆಗೆ ಐಹಿಕೋದ್ದೇಶಗಳದೇ ಮೇಲುಗೈ ಆಯಿತು.  ಐಶ್ವರ್ಯದ ಸುಲಿಗೆ ಹಾಗೂ ರಾಜ್ಯವಿಸ್ತರಣಗಳಲ್ಲಿ ಕುಲೀನರು ಆಸಕ್ತರಾಗಿದ್ದರು.  ಪೌರಸ್ತ್ಯ ದೇಶಗಳ ಸರಕಿನ ವ್ಯಾಪಾರದಲ್ಲಿ ಅರಬರು ಹೊಂದಿದ್ದ ಏಕಸ್ವಾಮ್ಯವನ್ನು ಮುರಿದು ಅದರೊಂದಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವುದು ಇಟಲಿಯ ನಗರಗಳಿಗೆ ಸಾಧ್ಯವಾಯಿತು.  ಸಾಹಸಪ್ರಿಯರಿಗೆ ಇವು ಒಳ್ಳೆ ಅವಕಾಶ ನೀಡಿದವು.

ಪ್ರಥಮ ಧಾರ್ಮಿಕ ಯುದ್ಧ ನಡೆದದ್ದು 1905 - 99 ರಲ್ಲಿ.  ವಾಲ್ಟರ್ ದಿ ಪೆನಿಲೆಸ್.  ಪೀಟರ್ ದಿ ಹರ್ಮಿಟ್ ಮತ್ತು ಇತರ ಕೆಲವರ ನಾಯಕತ್ವದಲ್ಲಿ ಹಲವು ಫ್ರೆಂಚ್ ಮತ್ತು ಜರ್ಮನ್ ಅಲೆಮಾರಿಗಳ ಅಶಿಸ್ತಿನ ಗುಂಪುಗಳು ಪೋಪ್ ಅರ್ಬನನ ಕರೆಗೆ ಓಗೊಟ್ಟು ನುಗ್ಗಿದುವು.  ಅವು ರೈನ್‍ಲ್ಯಾಂಡನ್ನು ಪ್ರವೇಶಿಸಿ ಅಲ್ಲಿದ್ದ ಯೆಹೋದ್ಯರ ಕೊಲೆ ಮಾಡಿದುವು;  ಬಲ್ಗೇರಿಯನರನ್ನೂ ಹಂಗೇರಿಯನರನ್ನೂ ಕೆಣಕಿದವು.  ಅವರು ಈ ಗುಂಪುಗಳ ಮೇಲೆ ಬಿದ್ದು ಇವನ್ನು ಚದರಿಸಿದರು.   ಈ ಗುಂಪುಗಳು ಚೆಲ್ಲಾಪಿಲ್ಲಿಯಾಗಿ  ಮುಂದುವರಿದು ಕಾನ್‍ಸ್ಟಾಂಟಿನೋಪಲನ್ನು ಸೇರಿದವು.  ಏಷ್ಯ ಮೈನರಿನಲ್ಲಿ ತುರ್ಕರು ಈ ಗುಂಪುಗಳನ್ನು ಸೋಲಿಸಿ ಓಡಿಸಿದರು.  1097 ರಲ್ಲಿ ನಡೆದ ದಂಡಯಾತ್ರೆ ಸಂಘಟಿತವಾದ್ದಾಗಿತ್ತು.  ಅದರ ನಾಯಕರು ಟುಲೂಸಿನ (ದಕ್ಷಿಣ ಫ್ರಾನ್ಸಿನ  ಒಂದು ನಗರ) 4 ನೆಯ ಕೌಂಟ್ ರೇಮಾನ್, ಬೂಯಾನಿನ (ಬೆಲ್ಜಿಯಮ್ಮಿನ ಒಂದು ನಗರ) ಗಾರ್ಡ್‍ಫ್ರೀ, ಬೋಯೇಮಾನ್ ಮತ್ತು ಟ್ಯಾಂಗ್‍ಕ್ರೆಡ್.  ಇವರ ಪೈಕಿ ರೇಮಾನ್ ಮತ್ತು ಟ್ಯಾಂಗ್‍ಕ್ರೆಡರನ್ನು ಬಿಟ್ಟು ಉಳಿದವರೆಲ್ಲ ಬಿeóÁಂಟೀನ್ ಚಕ್ರವರ್ತಿ 1 ನೆಯ ಅಲೆಕ್ಸಿಯಸನಿಗೆ ವಿಧೇಯತೆಯನ್ನು ಸಾರಿ, ತಾವು ಜಯಿಸಿದ ಪ್ರದೇಶಕ್ಕೆಲ್ಲ ಅವನೇ ಮಹಾಪ್ರಭುವೆಂಬುದನ್ನು ಒಪ್ಪಿದರು.  ಅವರ ದಂಡಯಾತ್ರೆ ಜಯಪ್ರದವಾಯಿತು.  1099 ರಲ್ಲಿ ಅವರು ಜೆರುಸಲೇಮ್‍ಅನ್ನು  ವಶಪಡಿಸಿಕೊಂಡರು.  ಲ್ಯಾಟಿನ್ ಪ್ರಭುತ್ವ ಸ್ಥಾಪಿತವಾಯಿತು.  ಜೆರುಸಲೆಮ್‍ಗೆ  ಹೋಗುತ್ತಿದ್ದ ಯಾತ್ರಿಕರ ರಕ್ಷಣೆಗಾಗಿ ಧರ್ಮ ಸೈನಿಕರನ್ನೂ (ನೈಟ್ ಟೆಂಪ್ಲಾರಸ್) ಯೋಧ ಸಂನ್ಯಾಸಿಗಳನ್ನೂ (ನೈಟ್ಸ್ ಹಾಸ್ಪಿಟಲರ್ಸ್) ನೇಮಿಸಲಾಯಿತು.

ಎರಡನೆಯ ಧಾರ್ಮಿಕ ಯುದ್ಧ ಸಂಭವಿಸಿದ್ದು 1147 - 49  ರಲ್ಲಿ.  ಇದಕ್ಕೆ ಬೋಧನೆ ನೀಡಿದವನು ಕ್ಲೇರ್‍ವೋನ ಸೇಂಟ್ ಬರ್ನಾಡ್.  1098 ರಲ್ಲಿ ಕ್ರೈಸ್ತರ ವಶವಾಗಿದ್ದ ಇಡೆಸ್ಸವನ್ನು ಮುಸ್ಲಿಮರು 1144 ರಲ್ಲಿ ಮತ್ತೆ ಗೆದ್ದು ಕೊಂಡದ್ದು ಈಯುದ್ಧಕ್ಕೆ ಪ್ರಚೋದನೆ ನೀಡಿತು.  ಜರ್ಮನಿಯ ದೊರೆಯಾಗಿದ್ದ,  ಪವಿತ್ರ ರೋಮನ್ ಚಕ್ರಾಧಿಪತ್ಯದ ಹೋಹೆನ್‍ಸ್ಟಾಫನ್ ವಂಶ ಸ್ಥಾಪಕನಾದ 3 ನೆಯ ಕಾನ್ರಾಡನೂ ಫ್ರಾನ್ಸಿನ 7 ನೆಯ ಲೂಯಿಯೂ ಇದರ ನೇತಾರರು.  ಈ ದಂಡಯಾತ್ರೆ ವಿಫಲಗೊಂಡಿತು.  ಈಜಿಪ್ಟ್, ಸಿರಿಯಗಳ ಸುಲ್ತಾನ ಸಾಲದಿನ್ 1187 ರಲ್ಲಿ ಜೆರುಸಲೆಮ್‍ಅನ್ನು ಹಿಡಿದುಕೊಂಡ.
ಮೂರನೆಯ ಯುದ್ಧ 1189 - 92 ರಲ್ಲಿ ಸಂಭವಿಸಿತು.  ಇದರ ನಾಯಕತ್ತ್ವ ವಹಿಸಿದವನು ಚಕ್ರವರ್ತಿ 1 ನೆಯ ಫ್ರೆಡರಿಕ್,  ಫ್ರಾನ್ಸಿನ 2 ನೆಯ ಫಿಲಿಪ್ ಮತ್ತು ಇಂಗ್ಲೆಂಡಿನ 1 ನೆಯ ರಿಚರ್ಡ್.  ಆದರೆ ಜೆರುಸಲೆಮ್ ನಗರವನ್ನು ವಶಪಡಿಸಿಕೊಳ್ಳಲು ಇವರು ಮಾಡಿದ ಪ್ರಯತ್ನ ವಿಫಲಗೊಂಡಿತು.  ಆದರೆ ಕ್ರಿಸ್ತನ ಸಮಾಧಿಗುಹೆಯನ್ನು ಪ್ರವೇಶಿಸಲು ಕ್ರೈಸ್ತರಿಗೆ ಅವಕಾಶ ದೊರಕುವಂತೆ 1 ನೆಯ ರಿಚರ್ಡ್ ದೊರೆ ಒಪ್ಪಂದ ಮಾಡಿಕೊಂಡ.

ನಾಲ್ಕನೆಯ ಯುದ್ಧ (1202  - 4) ಫ್ರಾನ್ಸಿನಲ್ಲಿ ಪ್ರಾರಂಭವಾಯಿತು.  ಆದರೆ ನಾಯಕನಾದ ಎನ್ರಿಕೊ ಡಾಂಡೋಲೋನಿಂದ ಆ ಯುದ್ಧದ ಉದ್ದೇಶವೇ ಸಂಪೂರ್ಣವಾಗಿ ವ್ಯತ್ಯಾಸವಾಯಿತು.  ಆತ ಅದನ್ನು ವೆನಿಸಿನ ಲಾಭಕ್ಕಾಗಿ ಬಳಸಿಕೊಂಡ.  ವೆನಿಷಿಯನರು eóÁರ ರೇವುಪಟ್ಟಣವನ್ನು ಹಂಗರಿಯಿಂದ ವಶಪಡಿಸಿಕೊಳ್ಳಲು ಈ ಯೋಧರು ನೆರವಾದರು (1202).  ತಮ್ಮ ದಂಡಯಾತ್ರೆಯ ಖರ್ಚನ್ನು ವೆನಿಷಿಯನರಿಂದ  ಸಂಪಾದಿಸಿಕೊಳ್ಳಲು ಅವರು ಹೀಗೆ ಮಾಡಿದರು.  ಕ್ರೈಸ್ತ ಪಟ್ಟಣವಾಗಿದ್ದ eóÁರದ ಮೇಲೆ ನಡೆಸಿದ ಈ ದಂಡಯಾತ್ರೆಯನ್ನು ಪೋಪ್ ಖಂಡಿಸಿದ. ಆಕ್ರಮಣಕಾರರೂ ಅನಂತರ ಕಾನ್‍ಸ್ಟಾಂಟಿನೋಪಲಿನ ಕಡೆಗೆ  ನುಗ್ಗಿದರು.  ರಾಜ್ಯ ಕಳೆದುಕೊಂಡಿದ್ದ ಎರಡನೆಯ ಐಸಾಕನನ್ನು ಮತ್ತೆ ಪೂರ್ವ ರೋಮನ್ ಚಕ್ರಾಧಿಪತ್ಯದ ಮೇಲೆ  ಕೂರಿಸುವುದು ಈ ದಂಡಯಾತ್ರೆಯ ಪ್ರಕಟಿತ ಉದ್ದೇಶ.  1204 ರಲ್ಲಿ ಅವರು ಕಾನ್‍ಸ್ಟಾಂಟಿನೋಪಲನ್ನು ಮುತ್ತಿ ಲೂಟಿಮಾಡಿ, ಅದರ ಲಾಭವನ್ನು ವೆನಿಸಿನೊಂದಿಗೆ ಹಂಚಿಕೊಂಡು ಲ್ಯಾಟಿನ್ ಚಕ್ರಾಧಿಪತ್ಯವನ್ನು ಸ್ಥಾಪಿಸಿದರು.

ಸ್ಟ್ರೀಫನ್ ಆಫ್ ಕ್ಲಾಯ್ಸ್ ಎಂಬ ಫ್ರೆಂಚ್ ರೈತ ಹುಡುಗನೊಬ್ಬ ಉಪದೇಶದಿಂದ ಸ್ಫೂರ್ತಿಗೊಂಡು ಸಾವಿರರು ಹುಡುಗರು ಜೆರುಸಲೆಮ್ ಕಡೆಗೆ ಪ್ರಯಾಣ ಬೆಳೆಸಿದರು.  ಆದರೆ ನೀಚನಾಯಕರು ಅವರನ್ನು ಗುಲಾಮರಾಗಿ ಮಾಡಿ ಮಾರಿದರು.  ಜರ್ಮನ್ ಹುಡುಗರ   ಗುಂಪೊಂದು ಭೂಮಾರ್ಗವಾಗಿ ಆ ಎಡೆಗೆ ಪ್ರಯಾಣ ಮಾಡಿತು.  ಆದರೆ ಅವರು ಹಸಿವು ರೋಗಗಳಿಂದ ನಾಶ ಹೊಂದಿದರು.

ಐದನೆಯ ಯುದ್ಧ  1217 - 21 ರಲ್ಲಿ ನಡೆಯಿತು.  ಮೂರನೆಯ ಇನ್ನೊಸೆಂಟ್ ಇದಕ್ಕೆ ಉಪದೇಶಕ.  ಈಜಿಪ್ಟಿನತ್ತ ನಡೆಸಿದ ಈ ದಂಡಯಾತ್ರೆ ವಿಫಲಗೊಂಡಿತು.

ಆರನೆಯ ದಂಡಯಾತ್ರೆಯನ್ನು (1228 - 29) ಚಕ್ರವರ್ತಿ 2 ನೆಯ ಫ್ರೆಡರಿಕ್ ಕೈಗೊಂಡ.  ಇದು ಶಾಂತಿಯುತವಾಗಿತ್ತು.  ಪವಿತ್ರಸ್ಥಳಗಳನ್ನು ಒಪ್ಪಿಸಲು ಅರಬರು ಸಮ್ಮತಿಸಿದರು.  ಆದರೆ ಮತ್ತೆ ಅಲ್ಲಿ ಇಲ್ಲಿ ಕದನಗಳು ಅರಂಭವಾದುವು.
ಈಜಿಪ್ಟಿನ ಮಾಮೆಲೂಕರು ಗಾeóÁದಿಂದ ಕ್ರೈಸ್ತರನ್ನು ಹೊರತಳ್ಳಿದ್ದರಿಂದ (1244) ಏಳನೆಯ ಧಾರ್ಮಿಕ ಯುದ್ಧ 1248 ರಲ್ಲಿ ಆರಂಭವಾಗಿ 1254ರವರೆಗೆ ನಡೆಯಿತು.  ಫ್ರಾನ್ಸಿನ 9 ನೆಯ ಲೂಯಿ ಇದರ ನಾಯಕ.  ಇದೂ ಸೋಲಿನಲ್ಲಿ ಪರ್ಯವಸಾನವಾಯಿತು.

ಈ ಪರಾಜಯವೇ ಎಂಟನೆಯ ಯುದ್ಧಕ್ಕೆ (1270)   ಕಾರಣವಾಯಿತು.  ಅಷ್ಟರಲ್ಲಿ ಲೂಯಿ  ತೀರಿಕೊಂಡಿದ್ದರಿಂದ ಅದು ಹಠಾತ್ತನೆ ಕೊನೆಗೊಂಡಿತು.

ಒಂಬತ್ತನೆಯ ಯುದ್ಧದ (1271 - 72) ನಾಯಕ ಇಂಗ್ಲೆಂಡಿನ ರಾಜಕುಮಾರ ಎಡ್ವರ್ಡ್ (ಅನಂತರ 1 ನೆಯ ಎಡ್ವರ್ಡ್).  ಇದೂ ವಿಫಲವಾಯಿತು.  ಕ್ರೈಸ್ತರ ಕೊಟ್ಟಕೊನೆಯ ಬಲಿಷ್ಠ ಕೇಂದ್ರವಾಗಿದ್ದ ಆಕರ್ ಕೂಡ 1291 ರಲ್ಲಿ ಪತನಹೊಂದಿತು.

ಪೋಪನ ಅನುಮತಿಯಿಂದ ವಿರೋಧಿಗಳ ಮೇಲೂ ಅನ್ಯಧರ್ಮೀಯರ ಮೇಲೂ ನಡೆಸಲಾದ ಇತರ ದಂಡಯಾತ್ರೆಗಳನ್ನೂ ಧಾರ್ಮಿಕ ಯುದ್ಧಗಳೆಂದು ಕರೆಯಲಾಗಿದೆ. 15 - 16 ನೆಯ ಶತಮಾನಗಳಲ್ಲಿ ತುರ್ಕರ ಮೇಲೆ ನಡೆಸಿದ ದಂಡಯಾತ್ರೆಗಳನ್ನೂ ಧಾರ್ಮಿಕ ಯುದ್ದಗಳೆಂದು ಒಟ್ಟಿನಲ್ಲಿ ಕರೆಯುವುದುಂಟು.

ಮುಖ್ಯ ಧಾರ್ಮಿಕ ಯುದ್ಧಗಳ ಮೂಲೋದ್ದೇಶ ಪವಿತ್ರ ಭೂಮಿಯ ವಿಮೋಚನೆಯಾದರೂ ಕಾರ್ಯತಃ ಇವು ಸ್ವಾರ್ಥ ಸಾಧನೆಯ ಉದ್ದೇಶದಿಂದ ನಡೆದುವು.  ಈ ಯುದ್ಧಗಳಿಂದ ಕೆಲವು ಒಳ್ಳೆಯ ಪರಿಣಾಮಗಳೂ ಆದುವು.  ಯೂರೋಪಿನ ಸಂಸ್ಕøತಿ, ವ್ಯಾಪಾರ ಮತ್ತು ಭೂಗೋಳ e್ಞÁನಗಳು ಹೆಚ್ಚಿದವು.   ಊಳಿಗಮಾನ್ಯ ವ್ಯವಸ್ಥೆ ದುರ್ಬಲವಾಯಿತು.  ಅನೇಕ ಪಾಳೆಯಗಾರರು.  ಈ ಯುದ್ಧಗಳಲ್ಲಿ ಸತ್ತದ್ದರಿಂದ ಸ್ವತಂತ್ರ ಜಮೀನುದಾರರು ಹೆಚ್ಚಿದರು. ವ್ಯಾಪಾರ ವಿಸ್ತರಣೆಯಿಂದ ವರ್ತಕರು ಧನವಂತರಾಗಿ ಮುಖ್ಯಪಟ್ಟಣಗಳಲ್ಲಿ ಕೈಗಾರಿಕೆ ಮತ್ತು ವ್ಯಾಪಾರ ಶ್ರೇಣಿಗಳನ್ನು (ಗಿಲ್ಡ್)  ಸ್ಥಾಪಿಸಿದರು.  ಇಟಲಿಯ ಅನೇಕ ನಗರಗಳು ಪೌರಸ್ತ್ಯ ವ್ಯಾಪಾರದಿಂದ ಅಭಿವೃದ್ಧಿ ಹೊಂದಿದುವು.  ವಿದೇಶೀ ವ್ಯಾಪಾರವೂ ನೌಕಾಬಲವೂ ಹೆಚ್ಚಿದುವು.  ಲೇವಾದೇವಿ ಬೆಳೆದಂತೆ ದೊಡ್ಡ ಸಂಸ್ಥೆಗಳು ಯೂರೋಪಿನ ವ್ಯಾಪಾರವನ್ನೆಲ್ಲ ತಮ್ಮ  ಹತೋಟಿಗೆ ತಂದುಕೊಂಡವು.  ಶ್ರೇಣಿಗಳು ಪದಾರ್ಥಗಳ ಗುಣ, ತೂಕ ಬೆಲೆಗಳನ್ನು ನಿರ್ಧರಿಸಿ ಒಂದೊಂದು ಕಸಬಿಗೂ ಕಾನೂನುಗಳನ್ನು ಮಾಡಿದವು.  ಜರ್ಮನಿಯ ಹ್ಯಾನ್ಸಿ ಯಾಟಿಕ್ ಲೀಗ್ ಎಂಬ ಸಂಸ್ಥೆ ಉತ್ತರ ಯೂರೋಪಿನ ಕೈಗಾರಿಕೆ ವ್ಯಾಪಾರಗಳನ್ನು ಹತೋಟಿಯಲ್ಲಿಟ್ಟುಕೊಂಡಿತು.  ಪಟ್ಟಣಗಳ ಆಡಳಿತ ಹೆಚ್ಚುಹೆಚ್ಚು ಸ್ಥಳೀಯವಾಯಿತು.  ಆಕ್ಸ್‍ಫರ್ಡ್, ಕೇಂಬ್ರಿಜ್, ನೀಪಲ್ಸ್, ಹೆಡಲ್‍ಬರ್ಗ್ ಮುಂತಾದ ವಿಶ್ವವಿದ್ಯಾನಿಲಯಗಳು ಸ್ಥಾಪಿತವಾದವು.  ಲ್ಯಾಟಿನ್ ಸಾಹಿತ್ಯದ ಪ್ರಭಾವ ಕಡಿಮೆಯಾಗಿ, ದೇಶಭಾಷೆಗಳ ಗ್ರಂಥಗಳು ಪ್ರಚಾರವಾದುವು.  ರಾಷ್ಟ್ರೀಯ ಮನೋಭಾವ ಬೆಳೆದು ರಾಷ್ಟ್ರೀಯ ಸಂಸ್ಥಾನಗಳು ಸ್ಥಾಪಿತವಾದುವು.
(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ